ಧೋ ಎಂದು ಮಳೆ ಸುರಿಯುತ್ತಿತ್ತು!
ಹಿದಿದ ಕೊಡೆಯ ತೂತಿನಿಂದ
ಒಂದೊಂದು ಹನಿ ಬಿದ್ದಾಗಲೂ-
ರೋಮಾಂಚನ! ಹೆಪ್ಪುಗಟ್ಟಿಸುವ ಛಳಿ,
ನರನರಗಳಲ್ಲಿಯೂ ಶಾಖಪ್ರವಾಹ!
ಕಾಮದಾಸೆಯಿರಲಿಲ್ಲ ಗೆಳತಿ
ಪ್ರೇಮವೀಣೆ ಮೌನವ್ರತದಲ್ಲಿತ್ತು!
ಬಹುವರ್ಶಗಳಿಂದ ಕಲೆತು ಕಲಿತ
ಖಾಸಗಿ ಬದುಕಿನ ನೆಲೆಯಲ್ಲಿ
ನಮ್ಮಿಬ್ಬರ ಆತ್ಮಗಳ ನಡುವಿನ-
ಮಧುರ ಬಾಂಧವ್ಯದ ಸವಿಯ-
ರಹಸ್ಯವರಿಯುವ ಆತುರವಿತ್ತು!
ಧೋ ಎಂದು ಮಳೆ ಸುರಿಯುತ್ತಿತ್ತು!
ಮುಂದೆ ಮುಂದೆ ನಡೆದ ನೀನು
ಜಾರಿದರೇಕೋ ತಳಮಳ ನನ್ನೆದೆಯಲ್ಲಿ.
ನೀ ಎಡವಿದ್ದು ನೋಡಿದರೆ ಮೂಕವೇದನೆ!
ರೋಧಿಸುವ ಮನ!
ಯಾಕೆಂದು ತಿಳಿಯುತ್ತಿಲ್ಲ,
ಮರೆತ ಮರುಕ್ಶಣವೇ
ಬಂದಪ್ಪಳಿಸುವ ನೆನಪಿನಲೆಗಳು.
ಅವುಗಳ ಭೋರ್ಗರೆತ, ಮೊರೆತ
ಎದೆಯಲ್ಲೇನೋ ನಡುಕ!
ಕೈಕಾಲುಗಳಲ್ಲಿ ಅರಿವಿಲ್ಲದ ಕಂಪನ!
ಧೋ ಎಂದು ಮಳೆ ಸುರಿಯುತ್ತಿತ್ತು, ಗೆಳತಿ!
ಇಂದು ಧೋ ಎಂದು ಸುರಿವ ಮಳೆಯಿಲ್ಲ!
ಆದರೂ ಸ್ಮರಣಸಮುದ್ರದ -
ಆರ್ಭಟ ಕಡಿಮೆಯಾಗಿಲ್ಲ....!
ಬಿಡದೆ ಸುರಿದ ಮಳೆಯಿಂದ
ನಮ್ಮಿಬ್ಬರ ನಡುವೆ ಹರಿದ ಹಳ್ಳದ-
ಹರಿವಿನ ಹರಹು ಹೆಚ್ಚಿದೆ೧
ಹಳ್ಳದ ನೀರು ಕಡಿಮೆಯಾಗಿದೆ!
ನೆನಪ ತೆಪ್ಪದಲ್ಲಿ ಮುಳುಗೇಳುತ್ತ
ಒಂದುಗೂಡಿ ಪಯಣಿಸುವ ಕನಸು ಮೂಡುತ್ತಿದೆ!
ಜೊತೆಯಲ್ಲೆ ತಲೆದಿಂಬು ಒದ್ದೆಯಾಗುತ್ತಿದೆ!
ಗೆಳತಿ, ಇಳೆಯಂತೆ ಕಾದ ಇಬ್ಬರ
ಬಿಸಿಯುಸಿರ ನಡುವೆ-
ತಲೆದಿಂಬು ಬಹುಬೇಗ ಒಣಗಬೇಕು!
ಕನಸೆಂಬ ಹೊಸಕೂಸು ಹುಟ್ಟಬೇಕು!
ಗುರುವಾರ, ಮೇ 1, 2008
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ